ಈಸೋಫ್ 
ತನ್ನ ನೀತಿಕಥೆಗಳಿಂದ ಪ್ರಸಿದ್ಧನಾದವ. ಕಾಲ ಬಹುಶಃ ಕ್ರಿ.ಪೂ. 568. ಸಾಮೋಸಿನ ಇಯಾದ್ಮನ್ನಿನ ಗುಲಾಮನಾಗಿದ್ದನೆಂದೂ ಡೆಲ್ಫಿಯ ಜನ ಸಿಟ್ಟಾಗಿ ಇವನನ್ನು ಕೊಂದರೆಂದೂ ಹೀರಡಟಸ್ (ಕ್ರಿ.ಪೂ. 5ನೆಯ ಶತಮಾನ) ಹೇಳಿದ್ದಾನೆ. ಇವನ ಮೇಲೆ ಒಂದು ಬಟ್ಟಲನ್ನು ಕದ್ದನೆಂಬ ಆರೋಪ ಹೊರಿಸಿದ್ದರೆಂಬ ಅಂಶವನ್ನು ಹಾಸ್ಯನಾಟಕಕಾರ ಅರಿಸ್ಟೋಫೆನೀಸ್ ತಿಳಿಸಿದ್ದಾನೆ. ತನ್ನ ಕಟ್ಟು ಕಥೆಗಳಂತೆಯೇ ಈಸೋಪ್ ಕಾಲ್ಪನಿಕ ವ್ಯಕ್ತಿಯೆಂದೂ ಹೇಳಿದವರುಂಟು.
ಈಸೋಪನ ಸಮಯಸ್ಫೂರ್ತಿಗೆ ಅರಿಸ್ಟಾಟಲ್ ಒಂದು ನಿದರ್ಶನ ಕೊಡುತ್ತಾನೆ. ಲಂಚ ತಿಂದು ಶ್ರೀಮಂತನಾದ ಒಬ್ಬ ಅಧಿಕಾರಿಯನ್ನು ತೆಗೆಯಬೇಕೆಂದು ಜನ ಒತ್ತಾಯ ಮಾಡಿದಾಗ ಈಸೋಪ್ ಒಂದು ಕಥೆ ಹೇಳಿದನಂತೆ. ಬೇಲಿಹಂದಿಯೊಂದು ನದಿಯ ಮೈಮೇಲಿನ ಚಿಕ್ಕಾಡುಗಳನ್ನು ತೆಗೆಯಲು ನೋಡಿದಾಗ ನರಿ, ಬೇಡ ಈಗಾಗಲೇ ನನ್ನ ರಕ್ತವನ್ನು ಹೊಟ್ಟೆತುಂಬುವಂತೆ ಹೀರಿದ ಚಿಕ್ಕಾಡುಗಳ ಬದಲಿಗೆ ಹಸಿದ ಚಿಕ್ಕಾಡುಗಳು ಬಂದು ನನ್ನಲ್ಲಿ ಉಳಿದಿರುವ ರಕ್ತ ಹೀರಬಹುದು ಎಂದಿತಂತೆ. ಬಡವನಾಗಿರುವ ಹೊಸ ಅಧಿಕಾರಿಯನ್ನು ತಂದರೆ ಆತ ಮತ್ತೆ ಲಂಚ ತಿನ್ನಲು ಪ್ರಾರಂಭಿಸುತ್ತಾನೆ. ಅವನಿಗಿಂತ ಲಂಚ ತಿಂದು ತೃಪ್ತನಾಗಿರುವ ಹಳೆಯ ಅಧಿಕಾರಿಯೇ ಉತ್ತಮ ಎಂಬ ತಾತ್ಪರ್ಯ ಕಥೆಯಲ್ಲಿ ಚೆನ್ನಾಗಿ ಧ್ವನಿಸುತ್ತದೆ.
ಈಸೋಪ್ ಸಂಗ್ರಹಿಸಿದ ಕಥೆಗಳಲ್ಲಿ (231 ರಿಂದ 250) ಕಾಲುಭಾಗ ಭಾರತದಿಂದ ಬಂದವು. ಹದಿಮೂರು ಬುದ್ಧನ ಜಾತಕ ಕಥೆಗಳಲ್ಲಿವೆ (ತೋಳ ಮತ್ತು ಕುರಿ; ಸಿಂಹದ ಚರ್ಮದಲ್ಲಿದ್ದ ಕತ್ತೆ, ಚಿನ್ನದ ತತ್ತಿ ಇಡುವ ಬಾತುಕೋಳಿ ಇತ್ಯಾದಿ). ರೈತ ಮತ್ತು ಸರ್ಪ, ಬೆಕ್ಕು ಹೆಣ್ಣಾದ ಕಥೆ ಮುಂತಾದವು ಮಹಾಭಾರತದ ದೃಷ್ಟಾಂತ ಕಥೆಗಳಿಗೆ ಹೋಲಿಕೆಯುಳ್ಳವು. ಉಳಿದವು ಗ್ರೀಸಿನಲ್ಲಿ ಬಳಕೆಯಲ್ಲಿದ್ದ ಜಾನಪದ ಕಥೆಗಳೆಂದು ನಂಬಲಾಗಿದೆ.
ಎಲ್ಲ ತರದ ಜನರ ರೀತಿನೀತಿ, ಜೀವನಕ್ರಮ ಆಚರಣೆಗಳನ್ನು ಪಶುಪಕ್ಷಿ ಕ್ರಿಮಿಕೀಟಾದಿಗಳ ಸಂಕೇತದಿಂದ ಈಸೋಪ್ ಬಹಳ ನೈಪುಣ್ಯದಿಂದ ತಿಳಿಸಿ ಮನುಷ್ಯರು ಹೇಗೆ ನಡೆಯಬೇಕೆಂದು ದಾರಿ ತೋರಿಸಿದ್ದಾನೆ-ಎಂದು 1484ರಲ್ಲಿ ಈಸೋಪ್‍ನ ನೀತಿಕಥೆಗಳನ್ನು ಅನುವಾದ ಮಾಡಿದ ವಿಲಿಯಂ ಕ್ಯಾಕ್ಸ್ಟನ್ ಹೇಳಿದ್ದಾನೆ. ಬೈಬಲಿನ ಅನಂತರದ ಶ್ರೇಷ್ಠ ಗ್ರಂಥವೆಂದು ಈ ಕಥೆಗಳನ್ನು ಮಾರ್ಟಿನ್ ಲೂಥರ್ ಹೊಗಳಿದ್ದಾನೆ. 

ಹುಂಜವೊಂದು ರತ್ನ ನಿರುಪಯೋಗಿಯೆಂದ ಕಥೆ, ಕಪ್ಪೆ ಎತ್ತಿನಂತಾಗಬೇಕೆಂದು ಹೊಟ್ಟೆಯೊಡೆದು ಸತ್ತ ಕಥೆ. ನರಿ ಕಾಗೆಯ ಬಾಯಲ್ಲಿದ್ದ ಮಾಂಸದ ಕರುಣೆಯನ್ನು ಲಪಟಾಯಿಸಿದ ಕಥೆ-ಮುಂತಾದವು ಹಾಸ್ಯದೃಷ್ಟಿಯಿಂದ ಚಮತ್ಕಾರವಾಗಿ ಸಾರ್ವಕಾಲಿಕ ಸತ್ಯಗಳನ್ನು ನಿರೂಪಿಸುತ್ತವೆ. ಕಥೆಗಳಲ್ಲಿ ಪ್ರಾಣಿಗಳ ಸ್ವಭಾವ ವೈಶಿಷ್ಟ್ಯಗಳು ಸ್ವಾರಸ್ಯವಾಗಿದೆ. ತೋಳ ಬಂತಲೇ ತೋಳ ಬಂತು, ದ್ರಾಕ್ಷಿಹಣ್ಣು ಹುಳಿ-ಮುಂತಾದ ಮಾತುಗಳು ನಮ್ಮ ಭಾಷಾಸಂಪತ್ತನ್ನು ಹೆಚ್ಚಿಸಿವೆ.
	
ಎಷ್ಟು ಸಂಗ್ರಹವಾಗಿ ಈಸೋಪ ಕಥೆ ಹೇಳಬಲ್ಲನೆಂಬುದಕ್ಕೆ ಒಂದು ಉದಾಹರಣೆ ಕೊಡಬಹುದು. ತನ್ನ ಒಂದೇ ಮರಿಯೊಡನೆ ಆಡುತ್ತಿದ್ದ ಸಿಂಹವನ್ನು ಕಂಡು ನರಿ 'ಅಯ್ಯೊ ! ಒಂದೇ ಮರಿ' ಎಂದಿತಂತೆ. ಅದಕ್ಕೆ ಸಿಂಹ ಗಂಭೀರವಾಗಿ “ಹೌದು, ಸಿಂಹದ ಮರಿ” ಎಂದಿತಂತೆ. ಈಸೋಪನಲ್ಲಿರುವ ಅತಿ ದೊಡ್ಡ ಕಥೆಯೆಂದರೆ ಕಾಡಿಲಿ ಊರಿಲಿಯ ಮನೆಗೂ ಊರಲಿ ಕಾಡಿಲಿಯ ಮನೆಗೂ ಔತಣಕ್ಕೆ ಹೋದ ಕಥೆ. ಇಲ್ಲಿ ನಗರಜೀವನಕ್ಕೂ ಗ್ರಾಮಜೀವನಕ್ಕೂ ಇರುವ ª್ಯÀತ್ಯಾಸವನ್ನು ಕವಿ ಹೃದಯಂಗಮವಾಗಿ, ವಿಸ್ತಾರವಾಗಿ ವಿವರಿಸಿದ್ದಾನೆ. 
ಈಸೋಪನ ಕಥೆಗಳು ವಿಶ್ವದ ಅನೇಕ ಭಾಷೆಗಳಲ್ಲಿ, ಪದ್ಯಗದ್ಯಗಳಲ್ಲಿ ಅನೇಕ ಬಾರಿ ಅನುವಾದವಾಗಿವೆ. ಕನ್ನಡದಲ್ಲಿ ಜಿ.ಪಿ. ರಾಜರತ್ನಂ ಮತ್ತು ಆನಂದರು ಅನುವಾದಿಸಿದ್ದಾರೆ. ಪೆಂಗ್ವಿನ್ ಗ್ರಂಥಮಾಲೆಯಲ್ಲಿ ಬಂದಿರುವ ಇಂಗ್ಲಿಷ್ ಗದ್ಯಾನುವಾದವಾದವಂತೂ ಬಹಳ ಚೆನ್ನಾಗಿದೆ. 
 (ಎಲ್.ಆರ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ